ಪಾಪ -
ಪಾಪ ಪುಣ್ಯಗಳ ಕಲ್ಪನೆ ಬಹಳ ಹಿಂದಿನಿಂದ ಬಂದಿದ್ದು. ಮಾನವನ ವೈಯಕ್ತಿಕ ಆರೋಗ್ಯ ಹಾಗೂ ಇತರ ಪ್ರಗತಿಗೆ, ಸಾಮಾಜಿಕ ಪ್ರಗತಿಗೆ ವಿರೋಧವಾಗಿರುವ ಎಲ್ಲವನ್ನೂ ಪಾಪಕಾರ್ಯಗಳೆಂದು ಪರಿಗಣಿಸಲಾಗಿದೆ. ಅಲ್ಲದೆ ಪಾಪದ ಕಲ್ಪನೆ ಕಾಲಕಾಲಕ್ಕೆ ಬದಲಾಗಿರುವುದನ್ನೂ ನಾವು ಇತಿಹಾಸದಲ್ಲಿ ಕಾಣುತ್ತೇವೆ. ಆದರೆ ಮೂಲಭೂತವಾಗಿ ಎಲ್ಲ ಧರ್ಮಗಳೂ ಎಲ್ಲ ಕಾಲಕ್ಕೂ ಒಪ್ಪಿರುವ ಪಾಪಗಳನ್ನು ಮಾತ್ರ ಇಲ್ಲಿ ವಿವೇಚಿಸಲಾಗಿದೆ.

ಹಿಂದೂ ಧರ್ಮದ ರೀತ್ಯ ಧರ್ಮಕ್ಕೆ ವಿರುದ್ಧವಾಗಿ ಮಾನವ ತಿಳಿದೊ ತಿಳಿಯದೆಯೊ ಮಾಡಿರುವ ಕೆಲಸಕ್ಕೆ ಪಾಪ (ದೋಷ) ಎಂದು ಹೆಸರು. ಕರ್ಮಸಿದ್ಧಾಂತವನ್ನು ಒಪ್ಪಿದಲ್ಲಿ ಮನುಷ್ಯ ಮಾಡಿದ ಪಾಪ (ಅಥವಾ ಪುಣ್ಯ) ಜನ್ಮಜನ್ಮಾಂತರಗಳಲ್ಲಿ ಅವನ ಬೆನ್ನು ಹತ್ತಿಬರುತ್ತದೆ.

ಪಾಪದಲ್ಲಿ ಮೂರು ಬಗೆ: (1) ವಿಘ್ನ-ಅಂದರೆ ಪರಿಪೂರ್ಣತೆಯನ್ನು ಪಡೆವಲ್ಲಿ ಅಡ್ಡಬರುವಂಥ ಅಡಚಣೆಗಳು. (2) ಅಪರಾಧಿ ದೋಷ. ಮಾನಸಿಕವಾಗಿ ಹಾಗೂ ದೈಹಿಕವಾಗಿ ಮಾಡಬಾರದ ಕೆಲಸಗಳು ಇಲ್ಲಿ ಬರುತ್ತವೆ. ದ್ವೇಷ, ಈರ್ಷೆ, ಕ್ರೋಧ ಇತ್ಯಾದಿ. ಅರಿಷಡ್ವರ್ಗಗಳು ಇಲ್ಲಿ ಸಲ್ಲುತ್ತವೆ. (3) ಪಾತಕ-ಅಂದರೆ ಪೂರ್ಣಪತನ. ಇಲ್ಲಿ ಉಪಪಾತಕ ಮಹಾಪಾತಕ ಎಂದು ಎರಡು ಬಗೆ. ಬ್ರಹ್ಮಹತ್ಯೆ ಶಿಶುಹತ್ಯೆ ಸುರಾಪಾನ ಸ್ವರ್ಣಸ್ತೇಯ ಗುರುತಲ್ಪ ಗಮನ-ಹೀಗೆ ಮಹಾಪಾತಕಗಳು ಐದು.
ಮಹಾತ್ಮಗಾಂಧಿಯವರು ಸಾಮಾಜಿಕ ಸಪ್ತಪಾಪಗಳನ್ನು ಹೀಗೆ ಗುರುತಿಸಿದ್ದಾರೆ. (1)ತತ್ವರಹಿತ ರಾಜಕೀಯ. (2) ದುಡಿಮೆಯಿಲ್ಲದ ಸಂಪತ್ತು (3) ನೀತಿಹೀನ ವಾಣಿಜ್ಯ (4) ಶೀಲವಿಲ್ಲದ ಶಿಕ್ಷಣ (5) ಆತ್ಮಸಾಕ್ಷಿರಹಿತ ಭೋಗ (6) ಮಾನವತಾ ಶೂನ್ಯ ವಿಜ್ಞಾನ (7) ತ್ಯಾಗವಿಲ್ಲದ ಪೂಜೆ.

ಜೈನರಲ್ಲಿ (ಬೌದ್ಧರಲ್ಲೂ) ಪಂಚ ಅಣುವ್ರತಗಳನ್ನು ಪಂಚಮಹಾವ್ರತಗಳನ್ನು ಧಿಕ್ಕರಿಸುವುದು ಪಾಪ.
ಕ್ರೈಸ್ತಧರ್ಮದ ರೀತ್ಯ ಪಾಪದ ವಿವರಣೆ ಹೀಗಿದೆ: ದೇವರು ಆದಿಯಲ್ಲಿ ಮಾನವನನ್ನು ತನ್ನ ಸ್ವರೂಪದಲ್ಲಿ ಸೃಷ್ಟಿಸಿದ. ತನ್ನಲ್ಲಿರುವ ದೇವರ ಸ್ವರೂಪವನ್ನು ಕಾಪಾಡಿಕೊಳ್ಳುವುದೇ ದೇವರ ಚಿತ್ರ. ಹಾಗೆ ಜೀವನ ನಡೆಸುವುದೇ ಮಾನವನ ಗುರಿ. ಈ ಗುರಿ ಮುಟ್ಟದಂತೆ ಮಾನವನನ್ನು ಕೆಡಿಸುವಂಥದ್ದೇ ಪಾಪ.

ದೇವರ ಸ್ವರೂಪವೆಂದರೆ, ಸ್ವತಂತ್ರತೆ, ಪರಿಶುದ್ಧತೆ, ಪ್ರೀತಿ, ಸತ್ಯತೆ, ನೀತಿ ಮುಂತಾದ ಗುಣಲಕ್ಷಣಗಳನ್ನೊಳಗೊಂಡ ಸ್ವಭಾವ. ಇವುಗಳ ವಿಷಯವಾದ ಪರಿಜ್ಞಾನ ಪ್ರತಿಮಾನವನ ಮನಸ್ಸಾಕ್ಷಿಯಲ್ಲಿ ಸ್ವಭಾವಸಿದ್ಧವಾಗಿರುತ್ತದೆ. ಇಂಥ ತನ್ನ ಮನಸ್ಸಾಕ್ಷಿಗೆ ವಿರೋಧವಾಗಿ ಇಚ್ಛಾಪೂರ್ವಕವಾಗಿ ಮಾಡುವಂಥದ್ದೇ ಪಾಪ. ಅದಕ್ಕೆ ಅವನೇ ಜವಾಬ್ದಾರ.
ಪಾಪಗಳಲ್ಲಿ ಕ್ಷಮ್ಯ, ಅಕ್ಷಮ್ಯವೆಂದು ಎರಡು ಬಗೆ. ಅಕ್ಷಮ್ಯ ಪಾಪಗಳು ಏಳು (1) ಅಹಂಕಾರ, (2) ಹೊಟ್ಟೆಕಿಚ್ಚು, (3) ಕೋಪ, (4) ಹೊಟ್ಟೆಬಾಕತನ, (5) ದುರಾಶೆ ಇಲ್ಲವೆ ಕಾಮ, (6) ಆಲಸ್ಯ, (7) ಲೋಭ.
ಮಾನವ ಇಂಥ ಪಾಪಕೃತ್ಯಗಳಲ್ಲಿ ತೊಡಗಬಾರದು.
(ಎಚ್.ಡಿ.ಎಲ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ